ಮಂಗಳೂರು-ಬೆಂಗಳೂರು ಖಾಸಗಿ ಬಸ್‌ನಲ್ಲಿ ತಿಗಣೆ ಕಾಟ; ನಟನ ಪತ್ನಿಗೆ 1.29 ಲಕ್ಷ ನೀಡುವಂತೆ ಕೋರ್ಟ್‌ ಆದೇಶ

New Project 1
Spread the love

ನ್ಯೂಸ್ ಆ್ಯರೋ: ಖಾಸಗಿ ಬಸ್‌ನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡುವ ವೇಳೆ ಕಿರುತೆರೆ ನಟ ವಿಜಯ್‌ ಶೋಭರಾಜ್‌ ಪಾವೂರ್‌ ಅವರ ಪತ್ನಿ ದೀಪಿಕಾ ಸುವರ್ಣ ಅವರಿಗೆ ತಿಗಣೆ ಕಚ್ಚಿ, ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ರಾಹಕ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

Vijay 1 380x217xt

ಸಂತ್ರಸ್ಥ ಮಹಿಳೆ ದೀಪಿಕಾ ಸುವರ್ಣಗೆ 1.29 ಲಕ್ಷ ರೂಪಾಯಿ ಪರಿಹಾರ ಪಾವತಿ ಮಾಡುವಂತೆ ಬಸ್‌ ಮಾಲೀಕರಿಗೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದೆ. 2022ರ ಆಗಸ್ಟ್‌ 16 ರಂದು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡಲು ಸೀಬರ್ಡ್‌ ಕಂಪನಿಯ ಸ್ಲೀಪರ್‌ ಬಸ್‌ನಲ್ಲಿ ಸೀಟ್‌ಅನ್ನು ರೆಡ್‌ ಬಸ್‌ ಅಪ್ಲಿಕೇಶನ್‌ ಮೂಲಕ ಬುಕ್‌ ಮಾಡಿದ್ದರು.

Screenshot 2025 01 01 200922

ರಾತ್ರಿ ಬಸ್‌ ಹತ್ತಿದ ಕೂಡಲೇ ತಿಗಣೆ ಕಾಟ ಶುರುವಾಗಿದೆ. ಈ ಕುರಿತಾಗಿ ಅವರು ಬಸ್‌ನ ಸಿಬ್ಬಂದಿಗೆ ಮಾಹಿತಿ ನೀಡಿದ್ದರೂ, ಅದಕ್ಕೆ ಯಾವುದೇ ಪರಿಹಾರ ನೀಡಿರಲಿಲ್ಲ. ತಿಗಣೆಯ ಕಾಟದಲ್ಲಿಯೇ ಬೆಂಗಳೂರಿನವರೆಗೂ ಪ್ರಯಾಣ ಮಾಡಿದ್ದ ದೀಪಿಕಾ ಸುವರ್ಣಗೆ ಅನಾರೋಗ್ಯ ಉಂಟಾಗಿತ್ತು. ಇದಕ್ಕಾಗಿ ಅವರು ಕೆಲ ದಿನ ಆಸ್ಪತ್ರೆಗೆ ದಾಖಲಾಗಬೇಕಾದ ಸ್ಥಿತಿ ಬಂದಿತ್ತು. ಅವರು ಪಾಲ್ಗೊಂಡಿದ್ದ ಶೋನಿಂದಲೂ ಅರ್ಧದಲ್ಲೇ ಹೊರಬಂದಿದ್ದರು. ಇದರಿಂದ ದಂಪತಿಗೆ ಭಾರೀ ನಷ್ಟ ಉಂಟಾಗಿತ್ತು.

ಈ ಕುರಿತಾಗಿ ಸೀಬರ್ಡ್‌ ಟೂರಿಸ್ಟ್‌ ಕೊಡಿಯಾಲ್‌ಬೈಲ್‌, ಮಂಗಳೂರು, ಸೀ ಬರ್ಡ್‌ ಟೂರಿಸ್ಟ್‌ ಬೆಂಗಳೂರು ಮತ್ತು ರೆಡ್‌ ಬಸ್‌ ಅಪ್ಲಿಕೇಶನ್‌ ವಿರುದ್ಧ ದೀಪಿಕಾ ಸುವರ್ಣ ಕೇಸ್‌ ದಾಖಲು ಮಾಡಿದ್ದರು.

ಮಹಿಳೆ ನೀಡಿದ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಸೋಮಶೇಖರಪ್ಪ.ಕೆ.ಹಂಡಿಗೋಲ್‌ ಮತ್ತು ಶಾರದಮ್ಮ ಎಚ್‌ಜಿ ಇದ್ದ ಪೀಠ, ದೀಪಿಕಾ ಅವರಿಗೆ ಮೆಡಿಕಲ್‌ ಬಿಲ್‌ ಮೊತ್ತ 18650 ರೂಪಾಯಿ, ಬಸ್‌ನ ಟಿಕೆಟ್‌ ಮೊತ್ತ 840 ರೂಪಾಯಿ, ಮಾನಸಿಕ ಕಿರಿಕಿರಿ, ಆರ್ಥಿಕ ನಷ್ಟ ಹಾಗೂ ಇತರ ಕಾರಣಗಳಿಗಾಗಿ 1ಲಕ್ಷ ರೂಪಾಯಿ ಹಣವನ್ನು ದೂರು ನೀಡಿದ ದಿನಾಂಕದಿಂದ (2023 ಏಪ್ರಿಲ್‌ 6) ಇಲ್ಲಿಯವರೆಗೆ ವಾರ್ಷಿಕ ಶೇ.6ರಷ್ಟರ ಬಡ್ಡಿಯೊಂದಿಗೆ ನೀಡಬೇಕು. ದೂರು ಮತ್ತು ವ್ಯಾಜ್ಯದ ಮೊತ್ತವಾಗಿ 10 ಸಾವಿರ ರೂಪಾಯಿ ಪಾವತಿ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಡಿಸೆಂಬರ್‌ 30 ರಂದು ಈ ಆದೇಶ ನೀಡಲಾಗಿದ್ದು, ಹಾಗೇನಾದರೂ ಆದೇಶ ನೀಡಿದ 45 ದಿನಗಳ ಒಳಗಾಗಿ ಈ ಮೊತ್ತವನ್ನು ಪಾವತಿ ಮಾಡದೇ ಇದ್ದಲ್ಲಿ, ಎಲ್ಲಾ ಮೊತ್ತವನ್ನು ಶೇ. 8ರ ವಾರ್ಷಿಕ ಬಡ್ಡಿದರದಲ್ಲಿ ನೀಡಬೇಕು ಎಂದು ಸೂಚನೆ ನೀಡಿದೆ. ಇದನ್ನು ಉಲ್ಲಂಘನೆ ಮಾಡಿದಲ್ಲಿ ಸಿವಿಲ್‌ ಅಥವಾ ಕ್ರಿಮಿನಲ್‌ ಮೊಕದ್ದಮೆಯಲ್ಲಿ ಬಸ್‌ ಕಂಪನಿ ಮೇಲೆ ಹಾಕಬಹುದು ಎಂದು ತಿಳಿಸಲಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!