ಸಿಲಿಕಾನ್ ಸಿಟಿಯಲ್ಲಿ ಒಂದೇ ಕುಟುಂಬದ ನಾಲ್ವರ ಸಾವು; ಅಸಲಿಗೆ ಆಗಿದ್ದೇನು? ಇದಕ್ಕೆ ಕಾರಣವೇನು?
ನ್ಯೂಸ್ ಆ್ಯರೋ: ಯಲಹಂಕ ತಾಲೂಕಿನ ಗ್ರಾಮ ಸಿಂಗನಾಯಕನಹಳ್ಳಿಯ ಯಡಿಯೂರಪ್ಪ ನಗರದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ನೇಣುಬಿಗಿದುಕೊಂಡು ದಂಪತಿ ಅವಿನಾಶ್(33), ಮಮತಾ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಸ್ಥಳಕ್ಕೆ ರಾಜಾನುಕುಂಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಹಣಕಾಸಿನ ಆರ್ಥಿಕ ತೊಂದರೆಯಿಂದ ಮನನೊಂದು ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ.
ಗಂಡನ ಆರ್ಥಿಕ ಸಂಕಷ್ಟವೇ ಆತ್ಮಹತ್ಯೆಗೆ ಕಾರಣವಾಯ್ತಾ?:
ಅವಿನಾಶ್ ಮತ್ತು ಮಮತಾ ದಂಪತಿ ಮೂಲತಃ ಕಲಬುರಗಿ ಮೂಲದವರು. ಕಳೆದ ಆರು ವರ್ಷಗಳಿಂದ ಈ ದಂಪತಿ ಬೆಂಗಳೂರಲ್ಲೇ ವಾಸವಿತ್ತು. ಅವಿನಾಶ್ ಸ್ವಂತ ಕ್ಯಾಬ್ ಹೊಂದಿದ್ದು ಓಲಾ ಉಬರ್ ಮಾಡ್ಕೊಂಡು ಜೀವನ ಸಾಗಿಸುತ್ತಿದ್ದ. ಗಂಡ ಹೆಂಡತಿ ಮಧ್ಯೆ ಎಲ್ಲವೂ ಚೆನ್ನಾಗಿತ್ತು. ಆದ್ರೆ ಕಳೆದ ಒಂದು ವಾರದ ಹಿಂದೆ ಅವಿನಾಶ್ಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು ಎನ್ನಲಾಗಿದೆ. ಕ್ರೆಡಿಟ್ ಕಾರ್ಡ್ ಸಮಸ್ಯೆಯಿಂದ ಅವಿನಾಶ್ ಹಣಕ್ಕಾಗಿ ಸಹಾಯ ಕೂಡ ಕೇಳಿದ್ರಂತೆ. ಈ ವಿಚಾರ ಹೆಂಡತಿ ಮುಂದೆಯೂ ಹೇಳಿಕೊಂಡಿದ್ರಂತೆ. ಹೀಗಾಗಿ ಹಣಕಾಸಿನ ವಿಚಾರಕ್ಕೆ ಈ ಕುಟುಂಬ ಸಾವಿಗೆ ಶರಣಾಗಿರಬಹುದು ಎನ್ನಲಾಗಿದೆ.
ಸಾವಿಗೂ ಮುನ್ನ ಏನೇನಾಯ್ತು?:
ಕಳೆದ ಭಾನುವಾರ ರಾತ್ರಿ ಅವಿನಾಶ್ ಪತ್ನಿ ಮಮತಾಗೆ ಕರೆ ಮಾಡಿದ್ದ. ಅನೇಕ ಬಾರಿ ಕಾಲ್ ಮಾಡಿದ್ರೂ ಮಮತಾ ಫೋನ್ ರಿಸೀವ್ ಮಾಡಿರಲಿಲ್ಲ. ಆಗ ಅವಿನಾಶ್ ಪಕ್ಕದ ಮನೆಯವರಿಗೆ ಕಾಲ್ ಮಾಡಿ ಪತ್ನಿಗೆ ಫೋನ್ ನೀಡುವಂತೆ ಹೇಳಿದ್ದ. ಹಲವು ಬಾರಿ ಮನೆಯ ಬಾಗಿಲು ಬಡಿದ್ರೂ ಮಮತಾ ಬಾಗಿಲು ತೆಗೆದಿರಲಿಲ್ಲ. ರಾತ್ರಿ 9 ಗಂಟೆಗೆ ಅವಿನಾಶ್ ಮನೆಗೆ ಬಂದಿದ್ದ. ಮತ್ತೊಂದು ಕೀ ಬಳಸಿ ಮನೆ ಬೀಗ ತೆಗೆದಾಗ ಪತ್ನಿ ಮತ್ತು ಮಕ್ಕಳು ಸತ್ತು ಬಿದ್ದಿರೋದು ಕಂಡಿದೆ. ಪತ್ನಿ ಮಕ್ಕಳ ಸಾವು ಕಂಡು ಬೆಚ್ಚಿ ಬಿದ್ದಿದ್ದ ಗಂಡ ಅವಿನಾಶ್ ಕೂಡ ಹೆಂಡತಿ ಸತ್ತಿದ್ದ ನೇಣಿನ ಹಗ್ಗಕ್ಕೆ ಶರಣಾಗಿದ್ದಾನೆ.
ಇನ್ನೂ ಮಮತಾನೇ ಮೊದಲು ಮಕ್ಕಳನ್ನ ಕೊಂದು ಬಳಿಕ ತಾನು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮೊದಲಿಗೆ ಇಬ್ಬರು ಮಕ್ಕಳ ಕತ್ತು ಹಿಸುಕಿ ಕೊಂದಿದ್ದ ತಾಯಿ ನಂತರ ತಾನು ಹಗ್ಗ ಕಟ್ಟಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಅಂತ ತಿಳಿದು ಬಂದಿದೆ. ಮಮತಾಳ ಕುತ್ತಿಗೆ ಭಾಗದಲ್ಲಿ ನೇಣಿನ ಕುಣಿಕೆಯ ಗುರುತು ಪತ್ತೆಯಾಗಿದೆ. ಗಂಡನ ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆಗೆ ನಿರ್ಧಾರ ಮಾಡಿದ್ರಾ ಪತ್ನಿ..? ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಈ ಕುಟುಂಬದ ದುರಂತ ಅಂತ್ಯ ಸಂಬಂಧಿಕರಿಗೂ ಶಾಕ್ ನೀಡಿದೆ.
Leave a Comment