ಮಂಗಳೂರಿನಲ್ಲಿ ಕುಣಿತ ಭಜನೆ ವಾರ್; ಹೆಣ್ಮಕ್ಕಳನ್ನು ಬೀದಿಯಲ್ಲಿ ಕುಣಿಸಲಾಗುತ್ತಿದೆ ಎಂದ ಕಾಂಗ್ರೆಸ್ ನಾಯಕಿ
ನ್ಯೂಸ್ ಆ್ಯರೋ: ಕೆಲ ದಿನಗಳ ಹಿಂದಷ್ಟೇ ಭಜನೆಯಲ್ಲಿ ಪಾಲ್ಗೊಳ್ಳುವ ಹಿಂದುಳಿದ ವರ್ಗಗಳ ಹಿಂದೂ ಹೆಣ್ಮಕ್ಕಳ ಬಗ್ಗೆ ದಕ್ಷಿಣಕನ್ನಡ ಜಿಲ್ಲೆಯ ಪಂಜ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ನೀಡಿದ್ದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು.
‘ಭಜನೆ ಮಾಡಿದ ಹಿಂದು ಹುಡುಗಿಯರನ್ನು ಮರದ ಅಡಿಯಲ್ಲಿ ಹಿಂದು ಹುಡುಗರು ಮಲಗಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ರೀತಿ 1 ಲಕ್ಷ ಹಿಂದುಳಿದ ವರ್ಗದ ಹುಡುಗಿಯರು ಸೂಳೆಯಾಗಿದ್ದಾರೆ’ ಎಂದು ಹೇಳಿದ್ದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ, ಈ ಪ್ರಕರಣದ ಬೆನ್ನಲ್ಲೇ ಮಂಗಳೂರಿನ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಕುಣಿತ ಭಜನೆಯಲ್ಲಿ ಹಿಂದುಳಿದ ವರ್ಗದ ಹೆಣ್ಣು ಮಕ್ಕಳನ್ನ ರಸ್ತೆ ಬೀದಿಯಲ್ಲಿ ಕುಣಿಸಲಾಗುತ್ತಿದೆ ಎಂದು ಹೇಳಿರುವುದು ಹೊಸ ಚರ್ಚೆಯೊಂದನ್ನು ಹುಟ್ಟು ಹಾಕಿದೆ.
ಕುಣಿತ ಭಜನೆ ತಪ್ಪಲ್ಲ. ಆದರೆ ಎಲ್ಲಿ ಕುಣಿಯಬೇಕೋ ಅಲ್ಲೇ ಕುಣಿಯಬೇಕು. ಹಾದಿ ಬೀದಿಯಲ್ಲಿ ಕುಣಿಯುವುದು ತಪ್ಪು ಎಂದಿರುವ ಪ್ರತಿಭಾ ಕುಳಾಯಿ, ಭಜನೆಯಲ್ಲಿ ಯಾವ ಮೇಲ್ವರ್ಗದ ಜನರು ನಮಗೆ ಕಾಣಿಸುತ್ತಿಲ್ಲ. ಮೇಲ್ವರ್ಗದ ಜನ ದೇವಸ್ಥಾನದ ಗೋಪುರದ ಒಳಗೆ ರೇಷ್ಮೆ ಸೀರೆ ಹಾಕಿರುತ್ತಾರೆ. ಒಡವೆ ಹಾಕಿ, ಅಲಂಕಾರ ಮಾಡಿ ದೇವರ ಮುಂದೆ ಕುಣಿಯುತ್ತಾರೆ. ಅದೇ ನಮ್ಮ ಹಿಂದುಳಿದ ವರ್ಗದ ಹೆಣ್ಣು ಮಕ್ಕಳು ಟ್ಯಾಬ್ಲೋ ಮುಂದೆ ಕುಣಿಯುತ್ತಾರೆ. ಮೆರವಣಿಗೆಯಲ್ಲಿ ಕುಣಿಯುತ್ತಾರೆ. ನಮ್ಮ ಮಕ್ಕಳನ್ನು ಕುಣಿತ ಭಜನೆಯ ಟ್ಯಾಗ್‌ನಡಿ ಕುಣಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಇನ್ನು ಕುಣಿತ ಭಜನೆಯಲ್ಲಿ ಹಿಂದುಳಿದ ವರ್ಗದ ಹೆಣ್ಣು ಮಕ್ಕಳ ಬಳಕೆ ಮಾಡಲಾಗುತ್ತಿದೆ ಎಂಬ ಪ್ರತಿಭಾ ಕುಳಾಯಿ ಹೇಳಿಕೆ ವಿಚಾರಕ್ಕೆ ಬಿಜೆಪಿ ಶಾಸಕ ಡಾ. ವೈ ಭರತ್ ಶೆಟ್ಟಿ ತಿರುಗೇಟು ನೀಡಿದ್ದಾರೆ.
ಭಜನೆ ವಿಷಯದಲ್ಲಿ ರಾಜಕೀಯ ದೃಷ್ಟಿ ಕೋನದಲ್ಲಿ ನೋಡುವುದು ಸರಿಯಲ್ಲ. ಹಿಂದೂ ಪರಂಪರೆಯಲ್ಲಿ ದೇವರನ್ನು ತಲುಪಲು ಭಜನೆಯು ಒಂದು ಮಾರ್ಗ ಎಂದು ಹೇಳಿದ್ದಾರೆ. ನೋಡುವ ಮನಸಿನಲ್ಲಿ ಕಲ್ಮಶವಿದ್ದವರು ಭಜನೆಯ ಬಗ್ಗೆ ತಪ್ಪಾಗಿ ಮಾತನಾಡುತ್ತಾರೆ. ಎಡಪಂಥೀಯ ಚಿಂತನೆಯಲ್ಲಿ ಈ ರೀತಿ ಹೆಚ್ಚಾಗಿ ಕಂಡು ಬರುತ್ತೆ. ಇದಕ್ಕೆ ಹಿಂದೂ ಸಮಾಜ ಸರಿಯಾದ ಉತ್ತರ ಕೊಡುತ್ತೆ. ಭಕ್ತಿಯಲ್ಲಿ ಬಡವ ಬಲ್ಲಿದ ಮೇಲು ಕೀಳು ಎಂಬುದು ಇರುವುದಿಲ್ಲ. ಕ್ಷುಲಕ ಕಾರಣ ತಂದು ಸಮಾಜದಲ್ಲಿ ಬಿರುಕು ಹುಟ್ಟಿಸುವ ಪ್ರಯತ್ನ ಇದು ಎಂದು ಕಿಡಿಕಾರಿದ್ದಾರೆ.
Leave a Comment