ಪ್ರಜೆಗಳನ್ನು ಸ್ವೀಕರಿಸಲ್ಲ ಎಂದ ಕೊಲಂಬಿಯಾಗೆ ಶಾಕ್‌ ; ಟ್ರಂಪ್‌ ಬೆದರಿಕೆ ಮಣಿದು ಈಗ ವಿಮಾನ ರವಾನೆ

Trump 1 1
Spread the love

ನ್ಯೂಸ್ ಆ್ಯರೋ: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ ಶಾಕ್‌ಗೆ ಬೆದರಿದ ಕೊಲಂಬಿಯಾ ತನ್ನ ಪ್ರಜೆಗಳನ್ನು ವಾಪಸ್‌ ಕರೆಸಿಕೊಳ್ಳಲು ವಿಮಾನ ಕಳುಹಿಸುವುದಾಗಿ ಹೇಳಿದೆ.

ಅಕ್ರಮ ವಲಸಿಗರನ್ನು ಹೊರದಬ್ಬುವ ಭಾಗವಾಗಿ ಅಮೆರಿಕ ಕೊಲಂಬಿಯಾ ಪ್ರಜೆಗಳನ್ನು ಗಡಿಪಾರು ಮಾಡಲು ಮುಂದಾಗಿತ್ತು. ಅಮೆರಿಕದ ನಿರ್ಧಾರಕ್ಕೆ ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಆಕ್ಷೇಪ ವ್ಯಕ್ತಪಡಿಸಿದ್ದರು.

ಕೊಲಂಬಿಯಾದ ಪ್ರಜೆಗಳನ್ನು ಹೊತ್ತುಕೊಂಡು ಬರುವ ಅಮೆರಿಕ ವಾಯುಪಡೆಯ ಎರಡು ವಿಮಾನಗಳ ಲ್ಯಾಂಡಿಂಗ್‌ ಅನುಮತಿ ನೀಡುವುದಿಲ್ಲ ಎಂದು ಗುಸ್ಟಾವೊ ಪೆಟ್ರೋ ಘೋಷಣೆ ಮಾಡಿದ್ದರು.

ಪೆಟ್ರೋ ನಿರ್ಧಾರದಿಂದ ಕೆಂಡಾಮಂಡಲವಾದ ಡೊನಾಲ್ಡ್‌ ಟ್ರಂಪ್‌ ತನ್ನ ಪ್ರಜೆಗಳನ್ನು ವಾಪಸ್‌ ಕರೆಸಿಕೊಳ್ಳದ್ದಕ್ಕೆ ಕೊಲಂಬಿಯಾ ಮೇಲೆ ತುರ್ತು 25 ಪ್ರತಿಶತ ಪ್ರತೀಕಾರದ ಸುಂಕ ವಿಧಿಸುವುದಾಗಿ ದಿಢೀರ್‌ ನಿರ್ಧಾರ ತೆಗೆದುಕೊಂಡರು.

ಒಂದು ವಾರದ ಬಳಿಕ ಸುಂಕ ಪ್ರಮಾಣವನ್ನು 50% ಏರಿಕೆ ಮಾಡಲಾಗುವುದು. ಕೊಲಂಬಿಯಾದ ಸರ್ಕಾರಿ ಅಧಿಕಾರಿಗಳು ಮತ್ತು ಎಲ್ಲಾ ಮಿತ್ರರಾಷ್ಟ್ರಗಳು ಮತ್ತು ಬೆಂಬಲಿಗರ ಮೇಲೆ ಪ್ರಯಾಣ ನಿಷೇಧ ಮತ್ತು ತಕ್ಷಣದಿಂದಲೇ ವೀಸಾ ರದ್ದು ಮಾಡಲಾಗುವುದು. ಕೊಲಂಬಿಯಾದ ಸರ್ಕಾರದ ಎಲ್ಲಾ ಪಕ್ಷದ ಸದಸ್ಯರು, ಕುಟುಂಬ ಸದಸ್ಯರು ಮತ್ತು ಬೆಂಬಲಿಗರ ವೀಸಾ ನಿರ್ಬಂಧಿಸುತ್ತೇವೆ. ಬ್ಯಾಂಕಿಂಗ್ ಮತ್ತು ಹಣಕಾಸು ನಿರ್ಬಂಧಗಳನ್ನು ಸಂಪೂರ್ಣವಾಗಿ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ಟ್ರಂಪ್‌ ನೀಡಿದ ಶಾಕ್‌ಗೆ ಕಕ್ಕಾಬಿಕ್ಕಿಯಾದ ಪೆಟ್ರೋ ಗಡಿಪಾರಾದ ಕೊಲಂಬಿಯಾದ ಪ್ರಜೆಗಳನ್ನು ಗೌರವಯುತವಾಗಿ ವಾಪಸ್‌ ಕರೆಸಿಕೊಳ್ಳಲು ನಾವೇ ವಿಮಾನವನ್ನು ವ್ಯವಸ್ಥೆ ಮಾಡುವುದಾಗಿ ಈಗ ಹೇಳಿದ್ದಾರೆ.

ಕೊಲಂಬಿಯಾದ ನಿರ್ಧಾರದ ನಂತರ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಹೇಳಿಕೆ ಬಿಡುಗಡೆ ಮಾಡಿ ಕೊಲಂಬಿಯಾದ ಮೇಲೆ ನಿರ್ಬಂಧ ಮತ್ತು ಸುಂಕಗಳನ್ನು ವಿಧಿಸುವುದಿಲ್ಲ ಎಂದು ತಿಳಿಸಿದ್ದಾರೆ.

Leave a Comment

Leave a Reply

Your email address will not be published. Required fields are marked *