‘ಲಕ್ಷ್ಮೀ ನಿವಾಸ’ ಚಿನ್ನುಮರಿಯ ಮನಗೆದ್ದ ‘ಪ್ರತ್ಯಕ್ಷ್’ ಯಾರು?; ಯಾವ ಖ್ಯಾತ ನಟನ ಕುಟುಂಬ ಸೇರುತ್ತಿದ್ದಾರೆ ಚಂದನಾ ?
ನ್ಯೂಸ್ ಆ್ಯರೋ: ಕನ್ನಡ ಕಿರುತೆರೆಯ ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿ ಜಾಹ್ನವಿ-ಜಯಂತ್ ಪಾತ್ರ ಅಂತೂ ಮುದ್ದು ಮರಿ-ಚಿನ್ನುಮರಿ ಅಂತಾನೇ ಫೇಮಸ್. ಸದ್ಯ ಚಿನ್ನುಮರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಜಾಹ್ನವಿ ಪಾತ್ರದ ಮೂಲಕ ಸೀರಿಯಲ್ ಪ್ರಿಯರ ಮನಸ್ಸು ಗೆದ್ದಿರೋ ನಟಿ ಚಂದನಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಪ್ರತಿಭಾವಂತ ನಟಿ ಆಗಿರೋ ಚಂದನಾ ಅವರು ಹಲವು ರಿಯಾಲಿಟಿ ಶೋಗಳು ಸೇರಿದಂತೆ ಧಾರಾವಾಹಿಗಳಲ್ಲಿ ಅಭಿನಯಿಸಿದ್ದು, ಈಗಂತೂ ಚಂದನಾ ಅಂದ್ರೆ ಪ್ರತಿ ಮನೆ ಮನೆಗೂ ಗೊತ್ತು. ಚಂದನಾ ಇದೀಗ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಕುಟುಂಬಸ್ಥರು ನಿಶ್ಚಯಿಸಿದ ಮದುವೆ ಇದಾಗಿದ್ದು, ಉದ್ಯಮಿ ಪ್ರತ್ಯಕ್ಷ್ ಜೊತೆ ಇದೇ ನವೆಂಬರ್ 28ಕ್ಕೆ ಬೆಂಗಳೂರಿನಲ್ಲಿ ಚಂದನಾ ಮದುವೆ ಜರುಗಲಿದೆ. ಈ ಮದುವೆಯಲ್ಲಿ ಕುಟುಂಬಸ್ಥರು, ಆಪ್ತರು, ಕಿರುತೆರೆಯ ಕಲಾವಿದರು ಭಾಗಿಯಾಗಲಿದ್ದಾರೆ.
ಚಿನ್ನುಮರಿ ಖ್ಯಾತಿಯ ಚಂದನಾ ಅನಂತಕೃಷ್ಣ ಅವರು ಉದ್ಯಮಿ ಪ್ರತ್ಯಕ್ಷ್ ಅವರನ್ನು ಮದುವೆಯಾಗುತ್ತಿದ್ದಾರೆ. ಪ್ರತ್ಯಕ್ಷ ಮೂಲತಃ ಚಿಕ್ಕಮಗಳೂರು ಮೂಲದವರಾಗಿದ್ದು, Mtech ವಿದ್ಯಾಭ್ಯಾಸ ಮಾಡಿದ್ದಾರೆ. ಸದ್ಯ ಬೆಂಗಳೂರಿನ ರಾಜಾಜಿನಗರದಲ್ಲಿ ನೆಲೆಸಿದ್ದಾರೆ.
ಪ್ರತ್ಯಕ್ಷ್ ಅವರದ್ದು ಸಿನಿಮಾ ಹಿನ್ನೆಲೆಯ ಕುಟುಂಬವಾಗಿದೆ. ಹಿರಿಯ ನಟ ದಿವಂಗತ ಉದಯ್ ಹುತ್ತಿನಗದ್ದೆ ಅವರ ಮಗ ಪ್ರತ್ಯಕ್ಷ್. ತಾಯಿ ಲಲಿತಾಂಜಲಿ ಉದಯ್ ಸಹ ಕಲಾವಿದೆ. ಲಲಿತಾಂಜಲಿ ಅವರು ಹಲವು ಸಿನಿಮಾ, ಸೀರಿಯಲ್ಗಳಲ್ಲಿ ಪೋಷಕ ಕಲಾವಿದೆಯಾಗಿ ನಟಿಸಿದ್ದಾರೆ. ಕಿನ್ನರಿ, ಒಲವಿನ ನಿಲ್ದಾಣ ಸೇರಿ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
ಪ್ರತ್ಯಕ್ಷ್ ತಾಯಿ ಲಲಿತಾಂಜಲಿ ಅವರು ಪಿಯುಸಿ ಓದುವಾಗಲೇ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು. 22ನೇ ವಯಸ್ಸಿಗೆ ನಟ ಉದಯ್ ಅವರನ್ನ ಮದುವೆಯಾದರು. ಉದಯ್, ಲಲಿತಾಂಜಲಿ ದಂಪತಿಗೆ ಪ್ರಾರ್ಥನಾ, ಪ್ರತ್ಯಕ್ಷ್, ಪ್ರಷಸ್ತ್ ಎಂಬ ಮೂವರು ಮಕ್ಕಳಿದ್ದಾರೆ.
ಲಲಿತಾಂಜಲಿ ಮೊದಲ ಮಗಳು ಪ್ರಾರ್ಥನಾ ವಿಶೇಷಚೇತನ ಆಗಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಮೊದಲ ಮಗಳು ಸಾವನ್ನಪ್ಪಿದ್ದು, ಮೂರನೇ ಮಗ ಪ್ರಷಸ್ತ್ ಸದ್ಯ ಡಿಗ್ರಿ ಓದುತ್ತಿದ್ದಾರೆ. ಎರಡನೇ ಮಗ ಪ್ರತ್ಯಕ್ಷ್ ಈಗ ಕಿರುತೆರೆ ನಟಿ ಚಂದನಾ ಅನಂತಕೃಷ್ಣ ಅವರನ್ನು ವರಿಸುತ್ತಿದ್ದಾರೆ.
ಇನ್ನು 80 ರ ದಶಕದ ಕೊನೆಯ ಹೊತ್ತಿಗೆ ತಮ್ಮ ನಿರ್ಮಾಣದ “ಆರಂಭ” ಎಂಬ ಸಿನಿಮಾ ದಲ್ಲಿ ನಾಯಕ ನಟನಾಗಿ ಮಿಂಚಿದ್ದರು. 1987ರಲ್ಲಿ ಆರಂಭ, 1988 ರಲ್ಲಿ ಡಾ.ರಾಜ್ ಕುಮಾರ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ದೇವತಾ ಮನುಷ್ಯ ಚಿತ್ರದಲ್ಲಿ ಸುಧಾರಾಣಿ ಅವರ ಜೋಡಿಯಾಗಿ ಉದಯ್ ಹುತ್ತಿನಗದ್ದೆ ಕಾಣಿಸಿಕೊಂಡಿದ್ದರು. ಜಯಭೇರಿ (1989), ಅಮೃತ ಬಿಂದು (1990), ಉದ್ಭವ (1990), ಶಿವಯೋಗಿ ಅಕ್ಕಮಹಾದೇವಿ (1991), ಕ್ರಮ (1991), ಉಂಡೂ ಹೋದ ಕೊಂಡೂ ಹೋದ (1992), ‘ಅಗ್ನಿಪರ್ವ’, ‘ಶುಭ ಮಿಲನ’ ಸೇರಿ ಹಲವು ಚಿತ್ರದಲ್ಲಿ ಇವರು ನಟಿಸಿದ್ದರು.
ಉದಯ್ ಹುತ್ತಿನಗದ್ದೆ ಹಲವು ಸಿನಿಮಾಗಳಲ್ಲಿ ನಟಿಸಿದ ನಂತರ ಚಿತ್ರರಂಗದಿಂದ ದೂರ ಉಳಿದಿದ್ದರು. ಆನಂದರಾವ್ ಸರ್ಕಲ್ನಲ್ಲಿ ಕಲರ್ ಲ್ಯಾಬ್ ಹಾಗೂ ಡಾ. ರಾಜ್ಕುಮಾರ್ ರಸ್ತೆಯಲ್ಲಿ ಫೋಟೋಗ್ರಫಿ ಸ್ಟುಡಿಯೋ ನಡೆಸುತ್ತಿದ್ದರು. ಪ್ರತ್ಯಕ್ಷ್ ತಂದೆ ಉದಯ್ ಹುತ್ತಿನಗದ್ದೆ ಅವರು 2022 ಜೂ.2 ರಂದು ನಿಧನರಾಗಿದ್ದಾರೆ.
Leave a Comment