
ಅದಾನಿ ಗ್ರೂಪ್ ನ 34,900 ಕೋಟಿಯ ಪ್ರಾಜೆಕ್ಟ್ ಸ್ಥಗಿತ – ಹಿಂಡನ್ ಬರ್ಗ್ ವರದಿಯ ಬಳಿಕ ನೆಲಕಚ್ಚುತ್ತಿದೆ ಅದಾನಿ ಗ್ರೂಪ್
- ವಾಣಿಜ್ಯ ಸುದ್ದಿ
- March 20, 2023
- No Comment
- 131
ನ್ಯೂಸ್ ಆ್ಯರೋ : ಅದಾನಿ ಗ್ರೂಪ್ ನ ಮಾಲಕ ಉದ್ಯಮಿ ಗೌತಮ್ ಅದಾನಿ ಅವರು ಗುಜರಾತಿನ ಮುಂದ್ರಾದಲ್ಲಿ ತಮ್ಮ 34,900 ಕೋಟಿ ರೂ.ಗಳ ಪೆಟ್ರೋಕೆಮಿಕಲ್ಸ್ ಯೋಜನೆಯನ್ನು ಸ್ಥಗಿತಗೊಳಿಸಿದ್ದಾರೆ.
ಈ ಯೋಜನೆಗಾಗಿ ಹಣ ಸಂಗ್ರಹಿಸುವ ಯೋಜನೆಗೂ ಅದು ತಿಲಾಂಜಲಿ ನೀಡಿದೆ. ಈ ಯೋಜನೆಗಾಗಿ ಎಸ್ಬಿಐ ನೇತೃತ್ವದ ಏಳರಿಂದ ಎಂಟು ಬ್ಯಾಂಕ್ಗಳ ಸಮೂಹದಿಂದ 14,000 ಕೋಟಿ ರೂಪಾಯಿ ಸಂಗ್ರಹಿಸಲು ಮಾತುಕತೆ ನಡೆಸಲಾಗುತ್ತಿತ್ತು. ಅದಾನಿ ಸಮೂಹದಿಂದ ನಡೆದಿದೆ ಎನ್ನಲಾದ ವಂಚನೆಗಳ ಬಗ್ಗೆ ಹಿಂಡನ್ಬರ್ಗ್ ಪ್ರಕಟಿಸಿದ ವರದಿಯಿಂದ ಆದ ಹಿನ್ನಡೆಯಿಂದ ಚೇತರಿಸಿಕೊಳ್ಳಲು ಕಂಪನಿ ಪ್ರಯತ್ನಿಸುತ್ತಿರುವುದರ ನಡುವೆಯೇ ವಾರ್ಷಿಕ ದಶಲಕ್ಷ ಟನ್ ಹಸಿರು ಪಿವಿಸಿ ಯೋಜನೆಯ ಎಲ್ಲ ಚಟುವಟಿಕೆಗಳನ್ನು ತಕ್ಷಣ ದಿಂದಲೇ ನಿಲ್ಲಿಸುವಂತೆ ಸಂಬಂಧಪಟ್ಟ ಎಲ್ಲ ವರ್ತಕರು ಮತ್ತು ಸರಬರಾಜು ದಾರರಿಗೆ ಅದಾನಿ ಗ್ರೂಪ್ ಇಮೇಲ್ ರವಾನಿಸಿದೆ.
ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಹಿಂಡೆನ್ ಬರ್ಗ್ ವರದಿಯ ಬಳಿಕ ಅದಾನಿ ಸಮೂಹ ತನ್ನ ಹೂಡಿಕೆಗಳನ್ನು ಎಚ್ಚರದಿಂದ ಮಾಡುತ್ತಿದೆ.
2019ರಲ್ಲಿ ಅದಾನಿ ಅವರು ತವರು ರಾಜ್ಯ ಗುಜರಾತಿನಲ್ಲಿ ಪೆಟ್ರೊಕೆಮಿಕಲ್ಸ್ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದಾಗಿ ಘೋಷಿಸಿದ್ದರು. ಎರಡು ವರ್ಷಗಳ ಬಳಿಕ ಮುಂದ್ರಾ ಪೆಟ್ರೊಕೆಮ್ ಮತ್ತು ಅದಾನಿ ಪೆಟ್ರೊಕೆಮಿಕಲ್ಸ್ , ತೈಲ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಲು ಮುಂದಾಗಿದ್ದವು.
ಮಾರುಕಟ್ಟೆಯಲ್ಲಿನ ಅನಿಶ್ಚಿತತೆ ಹಿನ್ನೆಲೆಯಲ್ಲಿ ಅದಾನಿ ಗ್ರೂಪ್ ಇದೀಗ ತನ್ನ ಗ್ರೀನ್ ಪಿವಿಸಿ ಪ್ರಾಜೆಕ್ಟ್ ಅನ್ನು ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ. ಭಾರತದಲ್ಲಿ ಪಿವಿಸಿ ವಾರ್ಷಿಕ ಬೇಡಿಕೆ 3.50 ದಶಲಕ್ಷ ಟನ್ ಆಗಿರುವ ಹಿನ್ನೆಲೆಯಲ್ಲಿ ಮುಂದ್ರಾ ಪೆಟ್ರೋಕೆಮಿಕಲ್ ಯೋಜನೆಯನ್ನು ಅದಾನಿ ಗ್ರೂಪ್ ರೂಪಿಸಿತ್ತು. ಇತ್ತೀಚೆಗೆ ಡಿಬಿ ಪವರ್ ಅನ್ನು ಖರೀದಿಸುವ 7,017 ಕೋಟಿ ರೂ.ಗಳ ಡೀಲ್ ಅನ್ನೂ ಅದಾನಿ ಗ್ರೂಪ್ ಸ್ಥಗಿತಗೊಳಿಸಿತ್ತು.