ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ ದೇಶ ತೊರೆದ ಶೇಖ್ ಹಸೀನಾ – ಸೇನೆಯ ಕೈಗೆ ಆಡಳಿತ ಸಾಧ್ಯತೆ, ಭಾರತಕ್ಕೆ ಬಂದಿಳಿದ್ರಾ ಪ್ರಧಾನಿ ಹಸೀನಾ?
ನ್ಯೂಸ್ ಆ್ಯರೋ : ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ತೀವ್ರಗೊಂಡಿದ್ದು, ಈವರೆಗೆ 300ಕ್ಕೂ ಹೆಚ್ಚು ಜನರು ಪ್ರತಿಭಟನಾ ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿದ್ದು ದೇಶ ತೊರೆದಿದ್ದಾರೆ.
ಜನವರಿಯಲ್ಲಿ ಪ್ರತಿಪಕ್ಷಗಳು ಬಹಿಷ್ಕರಿಸಿದ ಚುನಾವಣೆಯಲ್ಲಿ ಸತತ ನಾಲ್ಕನೇ ಬಾರಿಗೆ ಗೆದ್ದ ಹಸೀನಾ ಅವರನ್ನು ಪದಚ್ಯುತಗೊಳಿಸುವ ಅಭಿಯಾನಕ್ಕೆ ಚಾಲನೆ ಸಿಕ್ಕು ಭಾರೀ ಪ್ರತಿಭಟನೆ ಆರಂಭವಾಗಿತ್ತು.
170 ಮಿಲಿಯನ್ ಜನರಿರುವ ದೇಶಾದ್ಯಂತ ಭಾನುವಾರ ನಡೆದ ಹಿಂಸಾಚಾರದ ಅಲೆಯಲ್ಲಿ ಕನಿಷ್ಠ 91 ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ಸಾವಿರಾರು ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಬಳಸಿದ್ದಾರೆ.
ಈ ಎಲ್ಲಾ ಕಾರಣದಿಂದಾಗಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಯನ್ನು ನೀಡಿ, ಢಾಕಾದಿಂದ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಸದ್ಯ ಶೇಖ್ ಹಸೀನಾ ಮಿಲಿಟರಿ ಹೆಲಿಕಾಪ್ಟರ್‌ನಲ್ಲಿ ತನ್ನ ಕಿರಿಯ ಸಹೋದರಿ ಶೇಖ್ ರೆಹಾನಾ ಅವರೊಂದಿಗೆ ಭಾರತದ ಅಗರ್ತಲಾಗೆ ಬಂದಿಳಿದಿದ್ದು, ಲಂಡನ್ ನತ್ತ ತೆರಳುವ ಸಾಧ್ಯತೆ ಇದೆ ಎಂದು CNN ವರದಿ ಮಾಡಿದೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಬಾಂಗ್ಲಾದೇಶದ ಸೇನಾ ಮುಖ್ಯಸ್ಥರು ಸಂಜೆ 4: 30 ರ ಸುಮಾರಿಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ. ಹಾಗೆಯೇ ಸದ್ಯ ರಾಷ್ಟ್ರದ ಅಧಿಕಾರವನ್ನು ಸೇನೆಯೇ ವಹಿಸಿಕೊಳ್ಳಲು ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Leave a Comment