ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತ; ಖ್ಯಾತ ನಟಿ ಅಮೂಲ್ಯ ಸಹೋದರ ವಿಧಿವಶ
ನ್ಯೂಸ್ ಆ್ಯರೋ: ಇತ್ತೀಚೆಗಷ್ಟೇ ಖ್ಯಾತ ಸಾಹಿತಿ ಚಿ.ಉದಯಶಂಕರ್ ಸಹೋದರ ಕನ್ನಡದ ಹಿರಿಯ ನಿರ್ದೇಶಕ ಚಿ.ದತ್ತರಾಜ್ ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದರು. ಇದೀಗ ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತವಾಗಿದೆ. ‘ಮನಸಾಲಜಿ’, ‘ಶುಗರ್ ಫ್ಯಾಕ್ಟರಿ’ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ದೀಪಕ್ ಅಸರ್ ಅವರು ನಿಧನರಾಗಿದ್ದಾರೆ. ನಟಿ ಅಮೂಲ್ಯ ಅವರ ಸಹೋದರರಾದ ದೀಪಕ್ ಅವರು ಅನಾರೋಗ್ಯದಿಂದ ಮೃತರಾಗಿದ್ದಾರೆ. ಅ.17ರ ಸಂಜೆ 7 ಗಂಟೆ ಸುಮಾರಿಗೆ ಅವರು ಕೊನೆಯುಸಿರು ಎಳೆದಿದ್ದಾರೆ.
ಅವರಿಗೆ 42 ವರ್ಷ ವಯಸ್ಸಾಗಿತ್ತು. ದೀಪಕ್ ಅರಸ್ ಅವರಿಗೆ ಕಿಡ್ನಿ ವೈಫಲ್ಯ ಆಗಿತ್ತು. ಅದಕ್ಕೆ ಅವರು ಡಯಾಲಿಸಿಸ್ ಮಾಡಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಇಹಲೋಕ ತ್ಯಜಿಸಿದ್ದಾರೆ. ದೀಪಕ್ ಅರಸ್ ಅವರಿಗೆ ಮದುವೆ ಆಗಿ ಇಬ್ಬರು ಮಕ್ಕಳು ಇದ್ದಾರೆ. ಬೆಂಗಳೂರಿನ ಆರ್ಆರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ದೀಪಕ್ ಅವರು ಸಾವನ್ನಪಿದ್ದಾರೆ. ಬಳಿಕ ವಯ್ಯಾಲಿಕಾವಲ್ನ ನಿವಾಸಕ್ಕೆ ಮೃತ ದೇಹವನ್ನು ತರಲಾಗಿದೆ.
ಅಮೂಲ್ಯ, ರಾಕೇಶ್ ಅಡಿಗ, ಸಾಧು ಕೋಕಿಲ ಮುಂತಾದವರು ನಟಿಸಿದ್ದ ‘ಮನಸಾಲಜಿ’ ಸಿನಿಮಾಗೆ ದೀಪಕ್ ಅರಸ್ ಅವರು ನಿರ್ದೇಶನ ಮಾಡಿದ್ದರು. ಆ ಸಿನಿಮಾ 2011ರಲ್ಲಿ ಬಿಡುಗಡೆ ಆಗಿತ್ತು. ಬಳಿಕ ದೀಪಕ್ ಅವರು ಆ್ಯಕ್ಷನ್-ಕಟ್ ಹೇಳಿದ್ದು ‘ಶುಗರ್ ಫ್ಯಾಕ್ಟರಿ’ ಸಿನಿಮಾಗೆ. 2023ರ ನವೆಂಬರ್ನಲ್ಲಿ ‘ಶುಗರ್ ಫ್ಯಾಕ್ಟರಿ’ ಸಿನಿಮಾ ತೆರೆಕಂಡಿತ್ತು. ಆ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಸೋನಲ್ ಮಾಂತೆರೋ, ಅದ್ವಿತಿ ಶೆಟ್ಟಿ ಮುಂತಾದವರು ಅಭಿನಯಿಸಿದ್ದರು.
ದೀಪಕ್ ಅರಸ್ ನಿಧನಕ್ಕೆ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ.
Leave a Comment