Kargil Vijay Divas : 25 ವರ್ಷಗಳ ಹಿಂದಿನ ಯುದ್ಧದ ಮೆಲುಕು – ಹುತಾತ್ಮರಾದ ಸೈನಿಕರ ತ್ಯಾಗ ನೆನೆಯೋಣ ಬನ್ನಿ : ಅಂದು ಏನಾಗಿತ್ತು ಗೊತ್ತಾ??
ನ್ಯೂಸ್ ಆ್ಯರೋ : ಭಾರತೀಯರ ಪಾಲಿಗೆ ಕಾರ್ಗಿಲ್ ವಿಜಯ ದಿವಸ ಎನ್ನುವುದು ಎಂದೆಂದಿಗೂ ಮರೆಯಲಾಗದ ಘಟನೆ. ಭಾರತ ಮತ್ತು ಪಾಕಿಸ್ತಾನ ನಡುವೆ ಲಡಾಕ್ ನ ಕಾರ್ಗಿಲ್ ನಲ್ಲಿ ನಡೆದ ಯುದ್ಧದಲ್ಲಿ ಯಶಸ್ಸು ಭಾರತದ ಪಾಲಿಗೆ ಸಿಕ್ಕಿತು. ಈ ಯುದ್ಧದಲ್ಲಿ ತಮ್ಮ ಪ್ರಾಣತೆತ್ತ ಯೋಧರನ್ನು ಸ್ಮರಿಸುವ ದಿನ ಜುಲೈ 26ರ ಕಾರ್ಗಿಲ್ ವಿಜಯ ದಿವಸವಾಗಿದೆ.
ನಿಮಗೆ ತಿಳಿದಿರುವಂತೆ ಕಾರ್ಗಿಲ್ ಯುದ್ಧ ನಡೆದ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ಲೈನ್ ಆಫ್ ಕಂಟ್ರೋಲ್ ಇದೆ (ಎಲ್‌ಒಸಿ). ಆ ಪ್ರದೇಶದಲ್ಲಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಮೈನಸ್ ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದ ಕಾರಣ ಗಡಿ ಕಾಯುವುದು ಭಾರತಕ್ಕೆ ಸವಾಲಿನ ಕೆಲಸ. ಚಳಿಗಾಲದಲ್ಲಿ ಭಾರತೀಯ ಸೈನಿಕರು ಮತ್ತು ಪಾಕ್ ಸೈನಿಕರು ಅಲ್ಲಿಂದ ಸ್ಥಳಾಂತರಗೊಳ್ಳುತ್ತಾರೆ. ಚಳಿಗಾಲ ಮುಗಿದ ಬಳಿಕ ಇಲ್ಲಿಗೆ ಮತ್ತೆ ಗಡಿ ಕಾಯುವುದಕ್ಕೆ ಹೋಗುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ.
ಆದರೆ 1999 ರಲ್ಲಿ ಈ ಸಂದರ್ಭವನ್ನೇ ಬಳಸಿಕೊಂಡ ಪಾಕಿಸ್ತಾನ, ಭಾರತದ ಪ್ರಮುಖ ಭಾಗಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಆದರೆ ಅಂದು ಅಟಲ್ ಬಿಹಾರಿ ವಾಜಪೇಯಿಯವರು ತೆಗೆದುಕೊಂಡ ನಿರ್ಧಾರದಿಂದಾಗಿ ಭಾರತದ ಈ ಭಾಗವು ನಮ್ಮಲ್ಲಿಯೇ ಉಳಿದಿದೆ ಎನ್ನುವುದು ನಿಜಕ್ಕೂ ಖುಷಿ ಪಡುವ ವಿಚಾರವಾಗಿದೆ. ಆ ಕುರಿತಾದ ಸಂಪೂರ್ಣ ಮಾಹಿತಿಯು ಇಲ್ಲಿದೆ.
ಆಗಷ್ಟೇ ಭಾರತವು ಅಣುಪರೀಕ್ಷೆ ಮಾಡಿ ಜಗತ್ತಿನ ಕಣ್ಣು ಕೋರೈಸುವ ಸಾಧನೆಯನ್ನು ಮಾಡಿತ್ತು. ಪಾಕ್ ಕೂಡ ಅಮೇರಿಕಾದ ನೆರವು ಪಡೆದು ತನ್ನ ಬಳಿ ಅಣುಬಾಂಬು ಇದೆ ಎಂದು ಹೇಳಿಕೊಂಡಿತ್ತು. ಆಗ ಭಾರತದ ಪ್ರಧಾನಿ ಆಗಿದ್ದ ವಾಜಪೇಯಿ ಅವರು ತುಂಬಾ ಮೃದು ನಿಲುವಿನ ನಾಯಕ ಎಂದು ಪಾಕ್ ನಂಬಿ ಕುಳಿತಿತ್ತು. ಪಾಕಿಸ್ಥಾನಕ್ಕೆ ಜಗತ್ತಿನ ಅತೀ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ (Siachin) ವಶಪಡಿಸಿಕೊಳ್ಳಬೇಕು ಎಂಬ ದುರಾಸೆ. ಅಲ್ಲಿಂದ ಮುಂದೆ ಕಾರ್ಗಿಲ್ ಮತ್ತು ಮುಂದೆ ಇಡೀ ಕಾಶ್ಮೀರವನ್ನು ಕಬಳಿಸಬೇಕು ಎನ್ನುವ ಮಾಸ್ಟರ್ ಪ್ಲಾನ್! ಆಗ ಪಾಕಿಸ್ತಾನದ ಸೇನಾ ನಾಯಕ ಪರ್ವೇಜ್ ಮುಷರಫ್ ಹೊಂಚು ಹಾಕಿ ಕುಳಿತ ಕಾಲ ಅದು.
ಅದಕ್ಕೆ ಪೂರಕವಾಗಿ 1998ರ ಜೂನ್ ತಿಂಗಳಿಂದಲೇ ಪಾಕಿಸ್ಥಾನದ 5000ರಷ್ಟು ಸೈನಿಕರು ಲೈನ್ ಆಫ್ ಕಂಟ್ರೋಲ್ ದಾಟಿ ಭಾರತದ 4-10 ಕಿ.ಮೀ. ಒಳಗೆ ಬಂದು ಎತ್ತರದ ಪ್ರದೇಶದಲ್ಲಿ ಜಮಾವಣೆ ಆಗತೊಡಗಿದ್ದರು! ಅವರ ಬಳಿಗೆ ಆಧುನಿಕ ಶಸ್ತ್ರಾಸ್ತ್ರಗಳು ಬಂದು ತಲುಪಿದ್ದವು. ಆದರೆ 1999ರ ಮೇ 18ರವರೆಗೆ ಭಾರತ ಸರಕಾರಕ್ಕೆ ಇದರ ಬಗ್ಗೆ ಮಾಹಿತಿಯೇ ಇರಲಿಲ್ಲ. ಭಾರತೀಯ ಸೇನಾ ಗೂಢಚಾರ ಸಂಸ್ಥೆಯವರು ಇನ್ನೂ ಸ್ವಲ್ಪ ದಿನ ಮೈಮರೆತಿದ್ದರೆ…! ಆ ಕುರಿಗಾಹಿ ಹುಡುಗರು ಆ ನುಸುಳುಕೋರ ಸೈನಿಕರ ಬಗ್ಗೆ ಭಾರತೀಯ ಸೇನೆಗೆ ಮಾಹಿತಿ ಕೊಡದೇ ಹೋಗಿದ್ದರೆ ಭಾರೀ ಅನಾಹುತವಾಗುತ್ತಿತ್ತು…!
ಯುದ್ಧದ ಪರಿಸ್ಥಿತಿಯು ಬಂದೊದಗಿದಾಗ ವಾಜಪೇಯಿ ನೇತೃತ್ವದ ಸರ್ಕಾರವು ಪಾಕ್ ಗೆ ಯುದ್ಧದಿಂದ ಹಿಂದೆ ಸರಿಯುವಂತೆ ಎಚ್ಚರಿಕೆಯನ್ನು ನೀಡಿತು. ಆ ಸಂದರ್ಭದಲ್ಲಿ ಪ್ರಧಾನಿ ವಾಜಪೇಯಿಯವರೇ “ನಾವು ಅವರನ್ನು ಒಂದು ರೀತಿಯಲ್ಲಿ ಅಥವಾ ಇನ್ನೊಂದು ರೀತಿಯಲ್ಲಿ ಹೊರಹಾಕುತ್ತೇವೆ” ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದ್ದರು.
ಗಡಿಯ ಒಳಗೆ ಅಷ್ಟು ದೊಡ್ಡ ಸಂಖ್ಯೆಯ ಸೈನಿಕರು ನುಸುಳಿಬಂದ ವಿಷಯ ಭಾರತಕ್ಕೆ ಗೊತ್ತಾಯಿತು ಅಂದಾಗ ಮುಷರಫ್ ಅಲರ್ಟ್ ಆದರು. ಅವರು ನಮ್ಮ ಸೈನಿಕರೇ ಅಲ್ಲ, ಯಾವುದೋ ಭಯೋತ್ಪಾದಕ ಸಂಘಟನೆಯವರು ಎಂದು ಬಿಟ್ಟರು ಮುಷರಫ್! ಆದರೆ ಈಗ ಭಾರತದ ಪ್ರಧಾನಿ ವಾಜಪೇಯಿ, ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್ ಸೇನಾ ಮುಖ್ಯಸ್ಥರನ್ನು ಕರೆಸಿ ಯುದ್ಧ ಘೋಷಣೆ ಮಾಡಿಬಿಟ್ಟರು. ಆದರೆ ಭಾರತೀಯ ಸೈನ್ಯಕ್ಕೆ ಆ ಯುದ್ಧಕ್ಕೆ ಸಿದ್ಧತೆ ಮಾಡಲು ದೊರೆತದ್ದು 24 ಘಂಟೆ ಮಾತ್ರ! ಆದರೂ 1999ರ ಮೇ 3ರಂದು ಭಾರತ ಯುದ್ಧ ಘೋಷಣೆ ಮಾಡಿ ಆಗಿತ್ತು!
ಆರಂಭದಲ್ಲಿ ಭಾರತಕ್ಕೆ ಹಿನ್ನಡೆ ಆದದ್ದು ನಿಜ. ಆದರೆ ಮೇ 30 ಆಗುವಾಗ ಭಾರತದ 30,000 ಸೈನಿಕರು ಟೈಗರ್ ಹಿಲ್ ಬಳಿ ಬಂದು ಜಮಾವಣೆ ಮಾಡಿ ಆಗಿತ್ತು. ಭಾರತದ ಭೂಸೈನ್ಯ ಮತ್ತು ವಾಯು ಸೈನ್ಯಗಳು ವೀರಾವೇಶದಿಂದ ಹೋರಾಟಕ್ಕೆ ಇಳಿದಿದ್ದವು. ಎರಡೂ ಕಡೆಯ ಸೈನಿಕರು, ಬಾಂಬುಗಳು, ಮದ್ದುಗುಂಡುಗಳು, ಶೆಲ್‌ಗಳು ಸಿಡಿಯುತ್ತ ಕಾರ್ಗಿಲ್ ಯುದ್ಧಭೂಮಿಯು ರಕ್ತದಲ್ಲಿ ಒದ್ದೆಯಾಗುತ್ತಾ ಹೋಯಿತು. ಟೈಗರ್ ಹಿಲ್ ಏರಿ 10 ಪಾಕ್ ಸೈನಿಕರ ಹತ್ಯೆಯನ್ನು ನಮ್ಮ ಸೈನಿಕರು ಮಾಡಿದಾಗ ಭಾರತವು ಯುದ್ಧದಲ್ಲಿ ಸಣ್ಣ ಮೇಲುಗೈ ಸಾಧಿಸಿತು.
ಪ್ರತಿಕೂಲ ಹವಾಮಾನ ಹಾಗೂ ಕಡಿದಾದ ಬೆಟ್ಟಗಳ ಸಾಲಿನಲ್ಲಿ ಭಾರತೀಯ ಸೇನೆಯ ವೀರ ಯೋಧರು ಸುಮಾರು ಎರಡು ತಿಂಗಳ ಕಾಲ ಹೋರಾಟ ನಡೆಸಿದರು. ಪಾಕಿಸ್ತಾನದ ನುಸುಳುಕೋರರನ್ನು ಸದೆಬಡಿದ ಭಾರತೀಯ ಸೇನೆ, ಅವರನ್ನು ಹಿಮ್ಮೆಟ್ಟುವಂತೆ ಮಾಡುವುದರ ಜತೆಗೆ, ಈ ಪ್ರದೇಶದ ಟೈಗರ್ ಹಿಲ್ ಹಾಗೂ ಇತರ ಪ್ರಮುಖ ಪ್ರದೇಶಗಳನ್ನು ಮರಳಿ ತನ್ನ ವಶಕ್ಕೆ ಪಡೆಯುವ ಮೂಲಕ ಆಪರೇಷನ್ ವಿಜಯ್ ಯಶಸ್ವಿಯಾಗಿತ್ತು. ಕಾರ್ಗಿಲ್ ಯುದ್ಧ 1999ರ ಮೇನಲ್ಲಿ ಆರಂಭವಾಗಿ ಎರಡು ತಿಂಗಳ ಕಾಲ ನಡೆಯಿತು. ಅದೇ ವರ್ಷ ಜುಲೈ 26ರವರೆಗೂ ನಡೆದ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ 527 ಮಂದಿ ಭಾರತೀಯ ಯೋಧರು ಹುತಾತ್ಮರಾದರು.
ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಭಾರತೀಯ ಸೈನಿಕರ ಬಲಿದಾನ ಭಾರತಕ್ಕೆ ಒಂದು ದೊಡ್ಡ ವಿಜಯವನ್ನು ತಂದುಕೊಟ್ಟಿತ್ತು. ಅದರಲ್ಲಿ ಕರ್ನಾಟಕದ 21 ಸೈನಿಕರೂ ಇದ್ದರು. ಸಾವಿರಾರು ಯೋಧರು ತೀವ್ರವಾಗಿ ಗಾಯಗೊಂಡರು. ಪಾಕಿಸ್ತಾನವೂ ದೊಡ್ಡ ಸಂಖ್ಯೆಯ ಸೈನಿಕರನ್ನು ಕಳೆದುಕೊಂಡಿತ್ತು.
ನಮ್ಮ ಸೈನಿಕರಾದ ಸಿಯಾಚಿನ್ ಹೀರೋ ನಾಯಬ್ ಸುಬೇದಾರ್ ಬಾಣಾ ಸಿಂಗ್, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಮೇಜರ್ ಪದ್ಮಪಾಣಿ ಆಚಾರ್ಯ, ಗ್ರೆನೆಡಿಯರ್ ಯೋಗೇಂದರ್ ಸಿಂಘ್ ಯಾದವ್, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಕ್ಯಾಪ್ಟನ್ ಅನುಜ್ ನಯ್ಯರ್, ಲೆಫ್ಟಿನೆಂಟ್ ಬಲವಾನ್ ಸಿಂಘ್, ರೈಫಲ್ ಮ್ಯಾನ್ ಸಂಜಯ ಕುಮಾರ್, ಕ್ಯಾಪ್ಟನ್ ವಿಜಯವಂತ್ ಥಾಪರ್, ಮೇಜರ್ ಸೋನಂ ವಾಂಗಚುಕ್, ಲೆಫ್ಟಿನೆಂಟ್ ಕರ್ನಲ್ ವೈ.ಕೆ. ಜೋಷಿ ಇವರೆಲ್ಲರೂ ನಿಜವಾದ ಕಾರ್ಗಿಲ್ ಹೀರೋಗಳು. ಅದರಲ್ಲಿ ಹೆಚ್ಚಿನವರು ಹುತಾತ್ಮರಾದವರು. ಅವರಿಗೆಲ್ಲ ವಿವಿಧ ಸೇನಾ ಶೌರ್ಯ ಪ್ರಶಸ್ತಿಗಳನ್ನು ನೀಡಿ ಭಾರತ ಸರಕಾರವು ಗೌರವಿಸಿತು.
ಯುದ್ಧದಲ್ಲಿ ಮಡಿದ ವೀರ ಯೋಧರನ್ನು ನೆನೆಯುವ ಸಲುವಾಗಿ ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ ಎಂಬ ಹೆಸರಿನಡಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರಿಗಾಗಿ ಕರ್ನಾಟಕದ ಧಾರವಾಡದಲ್ಲಿ ಕಾರ್ಗಿಲ್ ಸ್ತೂಪವನ್ನೇ ನಿರ್ಮಿಸಲಾಗಿದೆ. ಕಾರ್ಗಿಲ್ ವಿಜಯ ದಿವಸ್‌ನ 25ನೇ ವರ್ಷಾಚರಣೆಯ ರಾಷ್ಟ್ರೀಯ ಕಾರ್ಯಕ್ರಮ ಈ ಬಾರಿ ಲಡಾಕ್‌ನ ಡ್ರಾಸ್‌ನಲ್ಲಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಗೆಲುವಿಗೂ ಮೊದಲೇ ಗೆಲುವು ಸಾರಿದ್ದ ವಾಜಪೇಯಿ..!!
ಅಂದಿನ ಪ್ರಧಾನಿ ವಾಜಪೇಯಿಯವರು ಯುದ್ಧ ಕೊನೆಗೊಳ್ಳುವ ಮುನ್ನವೇ ಭಾರತದ ಯಶಸ್ಸನ್ನು ಘೋಷಿಸಿಯೇ ಬಿಟ್ಟಿದ್ದರು. ಅಂದು ಜುಲೈ 14, ಹರಿಯಾಣದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಅಟಲ್ ಬಿಹಾರಿ ವಾಜಪೇಯಿ, ಪಾಕಿಸ್ತಾನದ ಮೇಲಿನ ಭಾರತದ ಯಶಸ್ಸನ್ನು ಯುದ್ಧ ಕೊನೆಗೊಳ್ಳುವ ಮೊದಲೇ ಘೋಷಿಸಿಯೇ ಬಿಟ್ಟಿದ್ದರು. ಆದರೆ ಯುದ್ಧವು ಜುಲೈ 26 ರಂದು ಕೊನೆಗೊಂಡಿತು. ಕೊನೆಗೂ ಪಾಕ್ ಗೆ ತಕ್ಕ ಉತ್ತರವನ್ನು ನೀಡುವ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಭಾರತವು ಗೆಲುವನ್ನು ಸಾಧಿಸಿತು. ಆದರೆ ಈ ಯುದ್ಧದ ಸಂದರ್ಭದಲ್ಲಿ ಬಹುಮತವನ್ನು ಕಳೆದುಕೊಂಡು ಹಂಗಾಮಿ ಪ್ರಧಾನಿಯಾಗಿ ಮುಂದುವರೆದಿದ್ದ ವಾಜಪೇಯಿಯವರು ಆ ಸಂದರ್ಭದಲ್ಲಿ ತೆಗೆದುಕೊಂಡಿದ್ದ ನಿರ್ಧಾರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಈಗ ಹೇಗಿದೆ ಕಾರ್ಗಿಲ್?
ಹಾಗಾದರೆ ಈಗ ಆ ಪ್ರದೇಶ ಹೇಗಿರಬಹುದು ಎಂಬ ಕುತೂಹಲ ಕೆಲವರಿಗೆ ಇರಬಹುದು. ಈ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನಗಳೆರಡೂ ತಮ್ಮ ಗಡಿಗಳನ್ನು ಹಿಂದಿಗಿಂತಲೂ ಮತ್ತಷ್ಟು ಭದ್ರಪಡಿಸಿಕೊಂಡಿವೆ. 25 ವರ್ಷದ ಹಿಂದಿದ್ದ ಸೇನೆಗಿಂತ ಮೂರು ಪಟ್ಟು ಹೆಚ್ಚು ಸೇನೆಯನ್ನು ನಿಯೋಜಿಸಲಾಗಿದೆ. ಜೊತೆಗೆ ಪಾಕ್ ಸೈನಿಕರು ಬಳಸಿದ್ದ ಕಳ್ಳ ಮಾರ್ಗಗಳನ್ನು ಗುರುತಿಸಿ, ಅವುಗಳಿಗೆ ಗ್ರಿಡ್‌ಗಳನ್ನು ಅಳವಡಿಸಲಾಗಿದೆ.
ಮೊದಲಿದ್ದ ಹಾಗೆ ಚಳಿಗಾಲದಲ್ಲಿ ಪೋಸ್ಟ್‌ಗಳು ಈಗ ಖಾಲಿ ಇರುವುದಿಲ್ಲ. ಎಲ್‌ಒಸಿ ಹತ್ತಿರದ ಪ್ರದೇಶದಲ್ಲಿ ಬಹಳಷ್ಟು ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದ್ದು, ಸೇನೆಯು ಹೊಸ ಯುದ್ಧ ಸಾಮಗ್ರಿಗಳನ್ನು ಇಟ್ಟುಕೊಳ್ಳಲು ಬೇರೆ ಬೇರೆ ಜಾಗಗಳನ್ನು ನಿರ್ಮಿಸಿದೆ. ಈ ಎಲ್ಲ ಸ್ಥಳಗಳಲ್ಲಿ ಫಿರಂಗಿ ಬಂದೂಕುಗಳು ಯಾವಾಗಲೂ ಲಭ್ಯ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ರಸ್ತೆ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲಾಗಿದೆ. ಮಾನವರಹಿತ ಕಣ್ಗಾವಲು ವ್ಯವಸ್ಥೆಯನ್ನು ಬಳಸಿಕೊಳ್ಳಲಾಗುತ್ತಿದೆ. ಉಪಗ್ರಹಗಳ ಸೇವೆ ಪಡೆಯಲಾಗುತ್ತಿದೆ. ಹಾಗಾಗಿ ಇಂತಹ ಸೌಕರ್ಯ ಮೊದಲಿಗಿಂತಲೂ ಹೆಚ್ಚು ಉಪಯೋಗವಾಗುತ್ತಿದೆ.
Leave a Comment