ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಆರ್. ಅಶ್ವಿನ್ ನಿವೃತ್ತಿ ಘೋಷಣೆ; ಭಾರತದ ಪರ ಅತ್ಯಧಿಕ ವಿಕೆಟ್ ಕಬಳಿಸಿದ ಸ್ಪಿನ್ ಲೆಜೆಂಡ್ ವಿದಾಯ
ನ್ಯೂಸ್ ಆ್ಯರೋ: ಟೀಮ್ ಇಂಡಿಯಾದ ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಬ್ರಿಸ್ಬೇನ್ನಲ್ಲಿ ನಡೆದ ಗಾಬಾ ಟೆಸ್ಟ್ ಪಂದ್ಯದ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಅಶ್ವಿನ್ ತಮ್ಮ ನಿವೃತ್ತಿಯನ್ನು ಘೋಷಿಸಿದರು.
ಈ ವೇಳೆ ಮಾತನಾಡಿದ ಅಶ್ವಿನ್, ನನ್ನಲ್ಲಿ ಇನ್ನೂ ಸಹ ಸ್ವಲ್ಪ ಕ್ರಿಕೆಟ್ ಉಳಿದಿದೆ ಎಂದು ಭಾವಿಸುತ್ತೇನೆ. ಅದನ್ನು ನಾನು ಕ್ಲಬ್ ಕ್ರಿಕೆಟ್ನಲ್ಲಿ ಮುಂದುವರೆಸಲು ನಿರ್ಧರಿಸಿದ್ದೇನೆ. ಇದು ಟೀಮ್ ಇಂಡಿಯಾ ಜೊತೆಗಿನ ನನ್ನ ಕೊನೆಯ ದಿನ. ನನ್ನ ಸಹ ಆಟಗಾರರಿಗೆ ಹಾಗೂ ಬಿಸಿಸಿಐಗೆ ಧನ್ಯವಾದಗಳು.
ಹಾಗೆಯೇ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ ಸೇರಿದಂತೆ ಎಲ್ಲರಿಗೂ ಧನ್ಯವಾದಗಳು. ಇವರೆಲ್ಲರ ಸಹಕಾರದಿಂದ ನಾನು ವಿಕೆಟ್ ಕಬಳಿಸಿದ್ದೇನೆ. ಇದರ ಜೊತೆಗೆ ಸದಾ ನಮ್ಮೊಂದಿಗೆ ಅತ್ಯುತ್ತಮ ಕ್ರಿಕೆಟ್ ಆಡಿದ ಆಸ್ಟ್ರೇಲಿಯಾ ತಂಡಕ್ಕೂ ನನ್ನ ಧನ್ಯವಾದಗಳು. ಹಾಗೆಯೇ ನನ್ನ ಈ ಜರ್ನಿಯಲ್ಲಿ ಜೊತೆಗೂಡಿದ ಪ್ರತಿಯೊಬ್ಬರು ಧನ್ಯವಾದ ಎನ್ನುವ ಮೂಲಕ ಅಶ್ವಿನ್ ಭಾವುಕತೆಯೊಂದಿಗೆ ವಿದಾಯ ಹೇಳಿದರು.
ಟೀಮ್ ಇಂಡಿಯಾ ಪರ 106 ಟೆಸ್ಟ್ ಪಂದ್ಯಗಳನ್ನಾಡಿರುವ ಅಶ್ವಿನ್ ಒಟ್ಟು 200 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ 27246 ಎಸೆತಗಳನ್ನು ಎಸೆದಿರುವ ಅವರು 537 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಅನಿಲ್ ಕುಂಬ್ಳೆ ಬಳಿಕ ಭಾರತದ ಪರ ಅತ್ಯಧಿಕ ವಿಕೆಟ್ ಕಬಳಿಸಿದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.
Leave a Comment