ಅಬುಧಾಬಿ T10 ಲೀಗ್; ಧಿಲ್ಲೋನ್ಗೆ 6 ವರ್ಷಗಳ ನಿಷೇಧ, ಕಾರಣವೇನು ?
ನ್ಯೂಸ್ ಆ್ಯರೋ: ಯುಎಇಯಲ್ಲಿ ನಡೆಯುವ ಅಬುಧಾಬಿ ಟಿ-10 ಲೀಗ್ ಮತ್ತೊಮ್ಮೆ ಮ್ಯಾಚ್ ಫಿಕ್ಸಿಂಗ್ ಆರೋಪದಿಂದಾಗಿ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ಈ ಲೀಗ್ನ 8ನೇ ಸೀಸನ್ ನಡೆದಿದ್ದು, ಈ ಸಂದರ್ಭದಲ್ಲೂ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವು.
ಅಭಿಮಾನಿಗಳು ಕೂಡ ಈ ಲೀಗ್ನಲ್ಲಿ ಮುಕ್ತವಾಗಿಯೇ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಈ ನಡುವೆ ಐಸಿಸಿ, ಮ್ಯಾಚ್ ಫಿಕ್ಸಿಂಗ್ ಆರೋಪದಡಿಯಲ್ಲಿ ತಂಡವೊಂದರ ಮಾಜಿ ಸಹಾಯಕ ಕೋಚ್ಗೆ 6 ವರ್ಷಗಳ ಕಾಲ ಎಲ್ಲಾ ಸ್ವರೂಪಗಳ ಕ್ರಿಕೆಟ್ನಿಂದ ನಿಷೇಧ ಹೇರಿದೆ.
ಅಬುಧಾಬಿ ಟಿ10 ಲೀಗ್ನಲ್ಲಿ ಫ್ರಾಂಚೈಸಿಯ ಮಾಜಿ ಸಹಾಯಕ ಕೋಚ್ ಆಗಿರುವ ಸನ್ನಿ ಧಿಲ್ಲೋನ್ ಅವರನ್ನು ಪಂದ್ಯಗಳನ್ನು ಫಿಕ್ಸ್ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಕ್ರಿಕೆಟ್ನ ಎಲ್ಲಾ ಸ್ವರೂಪಗಳಿಂದ ಆರು ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಿಷೇಧಿಸಿದೆ. ಕಳೆದ ವರ್ಷ ಧಿಲ್ಲೋನ್ ವಿರುದ್ಧ ಈ ಆರೋಪ ಹೊರಿಸಲಾಗಿತ್ತು.
ಇದೀಗ 13 ಸೆಪ್ಟೆಂಬರ್ 2023 ರಿಂದ ಜಾರಿಗೆ ಬರುವಂತೆ ಧಿಲ್ಲೋನ್ ಅವರನ್ನು 6 ವರ್ಷಗಳ ಕಾಲ ಕ್ರಿಕೆಟ್ನಿಂದ ನಿಷೇಧಿಸಲಾಗಿದೆ. 2021 ರಲ್ಲಿ ನಡೆದಿದ್ದ ಅಬುಧಾಬಿ ಟಿ10 ಕ್ರಿಕೆಟ್ ಲೀಗ್ ವೇಳೆ 8 ವ್ಯಕ್ತಿಗಳ ವಿರುದ್ಧ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪವನ್ನು ಹೊರಿಸಲಾಗಿತ್ತು. ಆ 8 ಮಂದಿಯಲ್ಲಿ ಫ್ರಾಂಚೈಸಿ ತಂಡದ ಮಾಜಿ ಸಹಾಯಕ ಕೋಚ್ ಆಗಿರುವ ಧಿಲ್ಲೋನ್ ಕೂಡ ಸೇರಿದ್ದರು.
ಇನ್ನು ಸನ್ನಿ ಧಿಲ್ಲೋನ್ ಅವರ ಮೇಲೆ ನಿಷೇಧ ಹೇರಿರುವ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಐಸಿಸಿ, ‘ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಸನ್ನಿ ಧಿಲ್ಲೋನ್ ತಪ್ಪಿತಸ್ಥರೆಂದು ಸಾಬೀತಾಗಿದೆ. ಹೀಗಾಗಿ ಅವರನ್ನು ಆರು ವರ್ಷಗಳ ಅವಧಿಗೆ ಎಲ್ಲಾ ಕ್ರಿಕೆಟ್ನಿಂದ ನಿಷೇಧಿಸಲಾಗಿದೆ ಎಂದು ತಿಳಿಸಿದೆ.
Leave a Comment