777 ಚಾರ್ಲಿ ಡೈರೆಕ್ಟರ್‌ಗೆ ಕೂಡಿಬಂತು ಕಂಕಣಭಾಗ್ಯ; ಕಿರಣ್ ರಾಜ್ ಮದುವೆ ಆಗುತ್ತಿರೋ ಹುಡುಗಿ ಯಾರು?

ನ್ಯೂಸ್ ಆ್ಯರೋ: ಕನ್ನಡದ ಸೂಪರ್ ಹಿಟ್ ಸಿನಿಮಾ ಚಾರ್ಲಿ-777 ಚಿತ್ರದ ನಿರ್ದೇಶಕ ಕಿರಣ್ ರಾಜ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಹೌದು, ಸ್ಟಾರ್ ನಿರ್ದೇಶಕ ಕಿರಣ್ ರಾಜ್ ಅವರು ಅನಯಾ ವಸುಧಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ನಿರ್ದೇಶಕ ಕಿರಣ್ ರಾಜ್ ಹಾಗೂ ಅನಯಾ ವಸುಧಾ ಅವರ ನಿಶ್ಚಿತಾರ್ಥವು ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದಿದೆ. ಈ ಸಂಭ್ರಮದಲ್ಲಿ ಕುಟುಂಬಸ್ಥರು, ಸ್ನೇಹಿತರು ಪಾಲ್ಗೊಂಡಿದ್ದರು. ಅಲ್ಲದೇ ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ಅವರು ಭಾಗಿಯಾಗಿದ್ದು ವಿಶೇಷವಾಗಿತ್ತು.
ಇನ್ನೂ, ನಿರ್ದೇಶಕ ಕಿರಣ್ ರಾಜ್ ಮಂಗಳೂರು ಗಡಿಭಾಗ ಕಾಸರಗೋಡು ಮೂಲದವರಾಗಿದ್ದು, ಅನಯ ವಸುಧಾ ಕೂಡ ಕಾಸರಗೋಡು ಮೂಲದವರು. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಸಿನಿಮಾವನ್ನು ಕಿರಣ್ ನಿರ್ದೇಶನ ಮಾಡಿ ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸಿದ್ದರು. 777 ಚಾರ್ಲಿ ಸಿನಿಮಾದ ನಿರ್ದೇಶನಕ್ಕಾಗಿ ಕಿರಣ್ ರಾಜ್ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಕಿರಣ್ ರಾಜ್ ನಿರ್ದೇಶನ ಮಾಡಿದ್ದ ಮೊದಲ ಸಿನಿಮಾವೇ ದೊಡ್ಡ ಗೆಲುವು ಕಂಡಿತ್ತು. ಬಾಕ್ಸ್ ಆಫೀಸ್‌ನಲ್ಲಿ 777 ಚಾರ್ಲಿ ನೂರಾರು ಕೋಟಿ ರೂ. ವ್ಯವಹಾರ ಮಾಡಿತು.
ವಿಭಿನ್ನ ಕಥಾ ಹಂದರವಿದ್ದ, ಚಾರ್ಲಿ ಸಿನಿಮಾ ಸೂಪರ್ ಹಿಟ್ ಆಗಿ ಕಿರಣ್ ಅವರಿಗೆ ಚಂದನವನದಲ್ಲಿ ಹೆಸರು ತಂದುಕೊಟ್ಟಿತ್ತು. ಇದೀಗ ಕಿರಣ್ ರಾಜ್ ಹಾಗೂ ಈ ಜೋಡಿ ಅನಯಾ ವಸುಧಾ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಇನ್ನೂ, ಅನಯಾ ವಸುಧಾ ಬೋಳಾರ್ ಅವರು ಭರತನಾಟ್ಯ ಪ್ರವೀಣೆಯಾಗಿದ್ದಾರೆ. ಅನಯಾ ಹುಟ್ಟಿ ಬೆಳೆದಿದ್ದೆಲ್ಲಾ ವಿದೇಶದಲ್ಲಿ ಎನ್ನಲಾಗುತ್ತಿದೆ. ಈ ಇಬ್ಬರ ನಿಶ್ಚಿತಾರ್ಥ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಕಿರಣ್ ರಾಜ್ ಮತ್ತು ಅನಯ ವಸುಧಾ ಅವರ ನಿಶ್ಚಿತಾರ್ಥ ಈಗತಾನೇ ನಡೆದಿದ್ದು, ಮದುವೆ ಯಾವಾಗ ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.
Leave a Comment