ಲಿವ್ ಇನ್ ಗೆಳತಿಯ ಹತ್ಯೆ; ಬರೋಬ್ಬರಿ 10 ತಿಂಗಳು ಫ್ರಿಡ್ಜ್ನಲ್ಲಿಟ್ಟಿದ್ದ ಪಾಪಿ
ನ್ಯೂಸ್ ಆ್ಯರೋ: ದೆಹಲಿಯಲ್ಲಿ ನಡೆದಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಆಕೆಯ ಲಿವ್ ಇನ್ ಗೆಳೆಯ ಅಫ್ತಾಬ್ ಪೂನಾವಾಲಾ ಶ್ರದ್ಧಾಳನ್ನು ಕೊಲೆ ಮಾಡಿ, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕಾಡಿಗೆಸೆದಿದ್ದ. ಇದೀಗ ಮತ್ತೊಂದು ಅಂತಹದ್ದೇ ಪ್ರಕರಣವೊಂದು ಒಂದು ಬೆಳಕಿಗೆ ಬಂದಿದ್ದು, ಬೆಚ್ಚಿ ಬೀಳಿಸುವಂತಿದೆ.
ಮಧ್ಯ ಪ್ರದೇಶದ ದೇವಾಸ್ ಜಿಲ್ಲೆಯ ದೇವಾಸ್ ಜಿಲ್ಲೆಯಲ್ಲಿ 41 ವರ್ಷದ ವ್ಯಕ್ತಿಯೊಬ್ಬ ತನ್ನ ಲಿವ್ ಇನ್ ಗೆಳತಿಯ ಹತ್ಯೆ ಮಾಡಿ, ಬರೋಬ್ಬರಿ 10 ತಿಂಗಳು ಫ್ರಿಡ್ಜ್ನಲ್ಲಿಟ್ಟಿದ್ದಾನೆ. ಆರೋಪಿಯನ್ನು ಸಂಜಯ್ ಪಾಟಿದಾರ್ ಎಂದು ಗುರುತಿಸಲಾಗಿದ್ದು, 2024 ರ ಮಾರ್ಚ್ನಲ್ಲಿ ಆರೋಪಿ ತನ್ನ ಲಿವ್ ಇನ್ ಗೆಳತಿ ಪ್ರತಿಭಾ ಪಟಿದಾರ್ ಎಂಬಾಕೆಯನ್ನು ಕೊಲೆ ಮಾಡಿ ಫ್ರಿಡ್ಜ್ನಲ್ಲಿಟ್ಟಿದ್ದ.
ಆರೋಪಿ ಸಂಜಯ್ ಪಾಟಿದಾರ್ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದು, ಮಾರ್ಚ್ನಲ್ಲಿ ತನ್ನ ಗೆಳತಿಯನ್ನು ಕೊಲೆ ಮಾಡಿ ಫ್ರಿಡ್ಜ್ನಲ್ಲಿಟ್ಟಿದ್ದ. ನಂತರ ತಾನು ಜುಲೈನಲ್ಲಿ ಮನೆ ಖಾಲಿ ಮಾಡಿ ಉಜ್ಜಯಿನಿಗೆ ತೆರಳಿದ್ದ. ಇತ್ತೀಚೆಗೆ ನೆರೆಹೊರೆಯವರು ದರ್ವಾಸನೆ ಬರುತ್ತದೆ ಎಂದು ಪೊಲೀಸರಿಗೆ ದೂರಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಕೊಳೆತ ರೀತಿಯಲ್ಲಿರುವ ಶವ ಪತ್ತೆಯಾಗಿದೆ.
ಶವ ಪತ್ತೆಯಾದ ಕೆಲವೇ ಗಂಟೆಗಳ ನಂತರ ಆರೋಪಿ ಸಂಜಯ್ನನ್ನು ಪೊಲೀಸರು ಉಜ್ಜಯಿನಿಯಿಂದ ಬಂಧಿಸಿದ್ದಾರೆ. ಘಟನೆ ಬಗ್ಗೆ ಮಾತನಾಡಿದ ಜನರು ಮನೆಯಿಂದ ದುರ್ವಾಸನೆ ಬರುತ್ತದೆ ಎಂದು ದೂರಿದ್ದರು. ಆ ನಿಟ್ಟಿನಲ್ಲಿ ಮನೆಯನ್ನು ಪರಿಶೀಲನೆ ನಡೆಸಿದಾಗ ಮಹಿಳೆಯ ಶವ ಪತ್ತೆಯಾಗಿದೆ. ಆಕೆಯ ಎರಡೂ ಕೈಗಳನ್ನು ಫ್ರಿಡ್ಜ್ನಲ್ಲಿ ಕಟ್ಟಿಹಾಕಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಸಂಜಯ್ ಕಳೆದ ಐದು ವರ್ಷಗಳಿಂದ ಪ್ರತಿಭಾ ಅವರೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದ. 2023 ರಲ್ಲಿ ಮಹಿಳೆಯ ಜೊತೆ ಆತ ದೇವಾಸ್ನ ಬಾಡಿಗೆ ಮನೆಯಲ್ಲಿ ವಾಸಿಸತೊಡಗಿದ್ದ. 2024 ರ ಜನವರಿಯಲ್ಲಿ ಅವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿತ್ತು. ಪ್ರತಿಭಾ ತಮ್ಮ ಸಂಬಂಧವನ್ನು ಕಡಿದುಕೊಳ್ಳಲು ಬಯಸಿದ್ದಳು. ಆದರೆ ಇದು ಸಂಜಯ್ಗೆ ಇಷ್ಟ ಇರಲಿಲ್ಲ.
ಮಾರ್ಚ್ನಲ್ಲಿ ಸಂಜಯ್ ತನ್ನ ಸ್ನೇಹಿತ ವಿನೋದ್ ದವೆ ಸಹಾಯದಿಂದ ಅವಳನ್ನು ಕೊಲ್ಲಲು ನಿರ್ಧರಿಸಿದನು. ಇಬ್ಬರು ಸೇರಿ ಆಕೆಯ ಕತ್ತು ಹಿಸುಕಿ, ಕೈ ಕಟ್ಟಿ ಶವವನ್ನು ರೆಫ್ರಿಜರೇಟರ್ನಲ್ಲಿ ತುಂಬಿದ್ದರು. ಕೊಲೆಯ ನಂತರ ಸಂಜಯ್ ಮನೆ ಖಾಲಿ ಮಾಡಿ ಒಂದು ಕೋಣೆಯಲ್ಲಿ ತನ್ನ ವಸ್ತುಗಳನ್ನು ಇರಿಸಿಕೊಳ್ಳಲು ಅನುಮತಿ ಪಡೆದುಕೊಂಡಿದ್ದ. ಆಗಾಗ ಮನೆಗೆ ಬಂದು ಹೋಗುತ್ತಿದ್ದ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.
Leave a Comment