ರಾಜ್ಯದಲ್ಲಿ 5 ವರ್ಷದೊಳಗಿನ 1.3 ಲಕ್ಷ ಮಕ್ಕಳಲ್ಲಿ ಅಪೌಷ್ಟಿಕತೆ: ಇದಕ್ಕೆ ಬಜೆಟ್ ಕಡಿತ ಕಾರಣ?
ನ್ಯೂಸ್ ಆ್ಯರೋ: ರಾಜ್ಯದಲ್ಲಿ ಬರೊಬ್ಬರಿ 1.3 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ರಾಜ್ಯದಲ್ಲಿ ಐದು ವರ್ಷದೊಳಗಿನ 1.3 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಈ ಪೈಕಿ 11,674 ತೀವ್ರತರ ಅಪೌಷ್ಟಿಕತೆ (SAM) ಯಿಂದ ಬಳಲುತ್ತಿದ್ದಾರೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿಅಂಶಗಳಿಂದ ತಿಳಿದುಬಂದಿದೆ. ಈ ವರದಿ ಪಾಲಕರಲ್ಲಿ ಭೀತಿ ಹುಟ್ಟುವಂತೆ ಮಾಡಿದೆ.
ಈ ಬೆಳವಣಿಗೆಗೆ ಬಜೆಟ್ ಕಡಿತ ಕೂಡ ಒಂದು ಕಾರಣವೆಂದು ಹೇಳಲಾಗುತ್ತಿದೆ. ಪೌಷ್ಠಿಕಾಂಶದ ಉಪಕ್ರಮಗಳನ್ನು ಬೆಂಬಲಿಸುವ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ (ICDS) ಕಾರ್ಯಕ್ರಮಕ್ಕಾಗಿ ಸರ್ಕಾರ ಹೆಚ್ಚಿನ ಅನುದಾನ ಮೀಸಲಿಡುತ್ತದೆ. ಆದರೆ, 2024 ರ ಬಜೆಟ್‌ನಲ್ಲಿ 300 ಕೋಟಿ ರೂ. ಕಡಿತ ಮಾಡಲಾಗಿದ್ದು. ಇದು ಸಮಸ್ಯೆ ಉಲ್ಬಣಕ್ಕೆ ಕಾರಣವೆಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿನ 65,911 ಅಂಗನವಾಡಿ ಕೇಂದ್ರಗಳಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 32.91 ಲಕ್ಷಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (WHO) SAM ಅನ್ನು ಮಗುವಿನ ಎತ್ತರಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ ತೂಕವನ್ನು ಹೊಂದಿರುವ ಸ್ಥಿತಿ ಎಂದು ವಿವರಿಸಿದೆ. MAM ಮತ್ತು SAM ಎರಡೂ ಮಗುವಿನ ಆರೋಗ್ಯದ ಮೇಲೆ ತೀವ್ರವಾದ ಆರೋಗ್ಯ ಪರಿಣಾಮಗಳನ್ನು ಹೊಂದಿವೆ.
SAM ನಿಂದ ಬಳಲುತ್ತಿರುವ ಮಕ್ಕಳು ತಮ್ಮ ಎತ್ತರಕ್ಕೆ ತುಂಬಾ ಕಡಿಮೆ ತೂಕವನ್ನು ಹೊಂದಿರುತ್ತಾರೆ ಮತ್ತು ಅವರ ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯಿಂದಾಗಿ ರೋಗಗಳ ಸಂದರ್ಭದಲ್ಲಿ ಸಾಯುವ ಸಾಧ್ಯತೆ ಒಂಬತ್ತು ಪಟ್ಟು ಹೆಚ್ಚಿರುತ್ತದೆ. MAM ನಿಂದ ಬಳಲುತ್ತಿರುವವರು ಬಾಲ್ಯದಲ್ಲಿ ಅನಾರೋಗ್ಯ ಮತ್ತು ಮರಣದ ಅಪಾಯವನ್ನು ಹೊಂದಿರುತ್ತಾರೆ.
ಬಡವರು ಮತ್ತು ಕಟ್ಟಕಡೆಯ ಸಮುದಾಯಗಳಲ್ಲಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಹೆಚಚಾಗಿದೆ. ಅಪೌಷ್ಟಿಕತೆಯನ್ನು ಎದುರಿಸಲು ಅಂಗನವಾಡಿ ಕೇಂದ್ರಗಳನ್ನು ಸರ್ಕಾರ ಬಳಸಿಕೊಳ್ಳುವುದು ಅತ್ಯಗತ್ಯವಾಗಿದೆ. ಅಂಗನವಾಡಿ ಶಿಕ್ಷಕರು ಆಹಾರ ವಿತರಣೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕು. ಪ್ರತಿ ದಿನ ಬಡಿಸುವ, ಸೇವಿಸಿದ ಮತ್ತು ಉಳಿದಿರುವ ಆಹಾರದ ಪ್ರಮಾಣವನ್ನು ಪರಿಶೀಲಿಸುವ ಮೂಲಕ ಮಕ್ಕಳ ಪೌಷ್ಟಿಕಾಂಶದ ಅಗತ್ಯಗಳನ್ನು ಗುರುತಿಸಬಹುದು ಎಂದು ತಜ್ಞರು ಹೇಳಿದ್ದಾರೆ.
Leave a Comment